Monday, November 2, 2009

ಪ್ರೀತಿ, ಪ್ರಕೃತಿ..

ಮರದ ಕೊನೆಯ ಹಸಿರಿನೆಲೆ ಚಿಗುರೊಡೆದಿತ್ತು
ಬೇರು ಬದುಕೆಂಬ ಆಸೆಯಲೇ ಕೊಂಚ ಹಿಗ್ಗಿತ್ತು
ಆಗಸದಲಿ ಒಂದು ಮೋಡ ಕವಿದಿತ್ತು
ಅದಕ್ಕೆ ಮರವ ಉಳಿಸುವ ಬಲವಿತ್ತು
ಮರ ಹಾಗು ಮೋಡಕೆ ಏನೋ ಪ್ರೀತಿ
ಈ ಬಂಧವ ಒಪ್ಪಲಿಲ್ಲ ಪ್ರಕೃತಿ !!

ಮೋಡಕೆ ಮರದ ಮೋಹ ಬೆಳೆಸಿದಳು
ನಿನ್ನ ಪ್ರೀತಿ ಬದುಕುವುದು, ಜೋರಾಗಿ ಮಳೆ ಸುರಿಸು ಎಂದಳು
ಮಮತೆಯ ಧಾರೆ ಶುರು ಆಯಿತು
ಮೊದಲ ಹನಿ ಎಲೆಯ ಚುಂಬಿಸುತ್ತಲೇ
ಮೋಡ ನಕ್ಕು ಕಂಪಿಸಿತು
ಎರಡನೆಯ ಹನಿ ಬಿದ್ದ ರಭಸದಲೇ
ಎಲೆಯು ಭೂಮಿಗೆ ಉದುರಿತು
ಪ್ರಕೃತಿಯ ಆಟಕೆ ಪ್ರೀತಿ ಬಲಿಯಾಗಿತ್ತು
ತನ್ನ ಕೊನೆಯ ಜೀವ ನಾಡಿಯ ಕಳೆದುಕೊಂಡಿತ್ತು

ಚಿಗುರಲಾಗದೆ, ಬೀಳಲಾರದೆ ಮರವು ಒಳಗೆ ಅಳುತಿದೆ
ತಾನು ತೋರಿದ ಅತಿಯಾದ ಪ್ರೀತಿಗೆ ಮೋಡಕ್ಕೂ ಪಶ್ಚಾತಾಪವಿದೆ ,
ಈಗ ಇಬ್ಬರಲ್ಲಿ ನಿಸರ್ಗಕ್ಕೂ ಅರ್ಥವಾಗದ ನೋವಿದೆ
ದೇವರೂ ಮುರಿಯಲಾರದ ಮೌನವಿದೆ
ಮರೆಯಲಾಗದ ಪ್ರೇಮವಿದೆ
ಜೊತೆಗೆ ಪ್ರಕೃತಿಯ ಶಾಪವಿದೆ !!!