Wednesday, December 23, 2009

ಕುರುಡು ಸಮಾಜ ??

ಕಣ್ಗಳು ಕಾಣದ ಜೀವಗಳು ಕನಸ ಕಾಣಲು ಕಲಿತಿವೆ ,
ಕನಸುಗಳನ್ನು ನನಸಾಗಿಸಲು ಎಂದೋ ಪಣವ ತೊಟ್ಟಿವೆ
ಸೃಷ್ಟಿಕರ್ತನ ಶಪಿಸುವ ಬದಲು ನ್ಯೂನತೆಯ ಮೆಟ್ಟಿ ನಿಂತಿವೆ ,
ಒಂದೇ ಆದರೂ ಹಗಲು ಇರುಳು, ಲಕ್ಷ್ಯವನ್ನು ಗಟ್ಟಿ ಹಿಡಿದಿವೆ
ನೆರಳು ಬೆಳಕಿನ ಮನದಲ್ಲಿ ಬಣ್ಣದ ಚಿಟ್ಟೆಗಳು ಹಾರುತ್ತಿವೆ
ನಾವೂ ಬದುಕಿದ್ದೇವೆ ಎಂದು ಕುರುಡಾದ ಸಮಾಜಕ್ಕೆ ಸಾರುತ್ತಿವೆ

ಅವರ ಕನಸುಗಳು ನಾಪಿಕವಾಗದಿರಲಿ
ಜೀವನದ ಮೇಲಿರುವ ಭರವಸೆಗಳು ಕುಗ್ಗದಿರಲಿ
ಹೊಸಬೆಳಕಿನ ಹುರುಪು ಹಸನಾಗಿರಲಿ
ಆಸೆಗಳ ಅಂಬಾರಿ ಸಾಗುತಲಿರಲಿ ....

ಹೊಳೆಯ ದಡದಿ

ಹೊಳೆ ದಡದಲ್ಲಿ ಕೂತಿರುವೆ ಗೆಳೆಯ
ನಿನ್ನ ಮೋಸವ ನೆನೆದು,
ನೀನಿಲ್ಲದೆ ನಗುತಿರುವೆ ಇನಿಯ
ಒಳಗಿರುವ ನೋವನ್ನು ಬಿಗಿದು

ಕಣ್ಣಂಚಲಿ ಇರುವ ಹನಿ ಕೊರಗಿದೆ
ಒಳಗೆ ಇರಲಾರದೆ , ಹೊರಗೆ ಬರಲಾರದೆ
ಕಣ್ಣೀರೇ ಅಳುತಿದೆ ....

ಬಾನಲ್ಲಿ ಇರುವ ಮೋಡ ನಕ್ಕಿತು ,
ನಾನು ಅತ್ತರೆ ಬಾನಿಂದ ದೂರಾಗುವೆ
ಭೂಮಿಯ ಒಪ್ಪಿಗೆ ಪಡೆದು
ಮತ್ತೆ ಬಾನಲ್ಲೇ ತೆಲಾಡುವೆ ಎಂದಿತು ..

ಕಣ್ಣೇರು ಅಳುವನ್ನು ನಿಲ್ಲಿಸಿತು
ಕಣ್ಣು, ರೆಪ್ಪೆಯ ಮುಚ್ಚುತ್ತಲೇ
ಹನಿಯು ಭೂಮಿಯ ಸೇರಿತು ..

ಸೂರ್ಯಾಸ್ಥವಾಗಿದೆ , ಕತ್ತಲು ಹರಡಿದೆ
ನಿನ್ನ ನೆನಪೆಲ್ಲವ ಹೊಳೆಯಲ್ಲಿ ಬಿಟ್ಟು
ಕಣೀರನು ದಡದಲ್ಲಿ ಸುಟ್ಟು
ಕಾಲು ಮನೆಯ ಕಡೆ ಹೆಜ್ಜೆ ಹಾಕಿದೆ ..

Wednesday, December 2, 2009

ತಾಯಿ

ಒಲವೆಂಬ ಒಲವೇ ಸೋಲಲು ಕಾರಣ ಅವಳು
ಜೀವನದ ಮೊದಲ ಬಾಗಿಲ ತೋರಣ ಅವಳು
ನಡೆಯಲೂ ಬರದಾಗ ಕೈ ಹಿಡಿದು ನಡೆಸಿದವಳು
ತಪ್ಪು ಎಸಗಿದಾಗ ಬಿಡದೆ ಬೆಂಬಲಿಸಿ ಬಂದವಳು

ಆಯಿ ಇಲ್ಲದೆ ಬಾಳೇ ಬರಡು,
ಸ್ವಚ್ಛ ಪ್ರೀತಿಯೇ ಹಾಗಲ್ಲವೇ ? ಅದು ಕುರುಡು
ಕಡಿಯುತ್ತಿದ್ದರೂ , ಮರ ಕಟುಕನಿಗೆ ನೆರಳು ನೀಡುವಂತೆ
ನಿರ್ಲಕ್ಷಿಸಿದರೂ ನಿನನ್ನು ಪ್ರೀತಿಸುವ ಸಹಿಷ್ಣುತೆ

ಈ ಪದಗಳ ಜೋಡಿಸುತ್ತಲೇ ಒಂದು ಪ್ರಶ್ನೆ ಹುಟ್ಟಿತು ,
ಕಾರಣವಿಲ್ಲದೆ ಹೇಗೆ ಪ್ರೀತಿಸುವುದೋ ಭೂಮಿಯನ್ನು ಮುಗಿಲು ?
ಮನಸ್ಸು ಸದ್ದಿಲ್ಲದೇ ಉತ್ತರಿಸಿತು ,
ಆಗ ನೆನಪಾಗಿದ್ದೇ ತಾಯಿಯ ಮಡಿಲು ..

Monday, November 2, 2009

ಪ್ರೀತಿ, ಪ್ರಕೃತಿ..

ಮರದ ಕೊನೆಯ ಹಸಿರಿನೆಲೆ ಚಿಗುರೊಡೆದಿತ್ತು
ಬೇರು ಬದುಕೆಂಬ ಆಸೆಯಲೇ ಕೊಂಚ ಹಿಗ್ಗಿತ್ತು
ಆಗಸದಲಿ ಒಂದು ಮೋಡ ಕವಿದಿತ್ತು
ಅದಕ್ಕೆ ಮರವ ಉಳಿಸುವ ಬಲವಿತ್ತು
ಮರ ಹಾಗು ಮೋಡಕೆ ಏನೋ ಪ್ರೀತಿ
ಈ ಬಂಧವ ಒಪ್ಪಲಿಲ್ಲ ಪ್ರಕೃತಿ !!

ಮೋಡಕೆ ಮರದ ಮೋಹ ಬೆಳೆಸಿದಳು
ನಿನ್ನ ಪ್ರೀತಿ ಬದುಕುವುದು, ಜೋರಾಗಿ ಮಳೆ ಸುರಿಸು ಎಂದಳು
ಮಮತೆಯ ಧಾರೆ ಶುರು ಆಯಿತು
ಮೊದಲ ಹನಿ ಎಲೆಯ ಚುಂಬಿಸುತ್ತಲೇ
ಮೋಡ ನಕ್ಕು ಕಂಪಿಸಿತು
ಎರಡನೆಯ ಹನಿ ಬಿದ್ದ ರಭಸದಲೇ
ಎಲೆಯು ಭೂಮಿಗೆ ಉದುರಿತು
ಪ್ರಕೃತಿಯ ಆಟಕೆ ಪ್ರೀತಿ ಬಲಿಯಾಗಿತ್ತು
ತನ್ನ ಕೊನೆಯ ಜೀವ ನಾಡಿಯ ಕಳೆದುಕೊಂಡಿತ್ತು

ಚಿಗುರಲಾಗದೆ, ಬೀಳಲಾರದೆ ಮರವು ಒಳಗೆ ಅಳುತಿದೆ
ತಾನು ತೋರಿದ ಅತಿಯಾದ ಪ್ರೀತಿಗೆ ಮೋಡಕ್ಕೂ ಪಶ್ಚಾತಾಪವಿದೆ ,
ಈಗ ಇಬ್ಬರಲ್ಲಿ ನಿಸರ್ಗಕ್ಕೂ ಅರ್ಥವಾಗದ ನೋವಿದೆ
ದೇವರೂ ಮುರಿಯಲಾರದ ಮೌನವಿದೆ
ಮರೆಯಲಾಗದ ಪ್ರೇಮವಿದೆ
ಜೊತೆಗೆ ಪ್ರಕೃತಿಯ ಶಾಪವಿದೆ !!!